ಯೂಗೋಸ್ಲಾವಿಯ
ಮಧ್ಯಯುರೋಪಿನ  ದಕ್ಷಿಣದಲ್ಲಿರುವ ಒಂದು ರಾಷ್ಟ್ರ. ಹಿಂದಿನ ಯುಗೋಸ್ಲಾವಿಯ ಸಮಾಜವಾದಿ ಒಕ್ಕೂಟ ಗಣರಾಜ್ಯ. ಇತ್ತೀಚಿನ ರಾಜಕೀಯ ಬೆಳೆವಣಿಗೆಗಳಿಂದಾಗಿ ಭೌಗೋಳಿಕ ವ್ಯಾಪ್ತಿ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಇಂದು ಸರ್ಬಿಯ ಮತ್ತು ಮಾಂಟನೀಗ್ರೋ ಪ್ರಾಂತಗಳು ಸೇರಿ ಸಂಯುಕ್ತ ಗಣರಾಜ್ಯವನ್ನು ರಚಿಸಿಕೊಂಡು ಹಿಂದಿನ ಯುಗೊಸ್ಲಾವಿಯ ಒಕ್ಕೂಟದ ನಿಜವಾದ ಸಂವೈಧಾನಿಕ ಉತ್ತರಾಧಿಕಾರಿಗಳೆಂದು ಕರೆದುಕೊಂಡಿದೆ  

ಹಳೆಯ ಸಮಾಜವಾದಿ ಒಕ್ಕೂಟ ರಾಷ್ಟ್ರವಾದ ಯುಗೋಸ್ಲಾವಿಯದಿಂದ ಬೋಸ್ನೀಯ ಮತ್ತು ಹರ್ಟಸಗೋವಿನ (1922), ಮ್ಯಾಸೆಡೋನಿಯಾ (1993) ಮತ್ತು ಕ್ರೊಯೇಷಿಯಾ ಹಾಗೂ ಸ್ಲೊವೇನಿಯಗಳು ಸ್ವತಂತ್ರವಾಗಿವೆ. ಆದ್ದರಿಂದ ಈಗಿನ ಯುಗೋಸ್ಲಾವಿಯದ  ಸರಹದ್ದನ್ನು ಈ ಮುಂದಿನಂತೆ ಗುರುತಿಸಬಹುದು. ಉತ್ತರಕ್ಕೆ ಹಂಗರಿ, ಪೂರ್ವಕ್ಕೆ ರುಮೇನಿಯ ಮತ್ತು ಬಲ್ಗೇರಿಯಾ, ದಕ್ಷಿಣಕ್ಕೆ  ಮ್ಯಾಸೆಡೋನಿಯ ಮತ್ತು ಆಲ್ಬೇನಿಯ ಹಾಗೂ ಪಶ್ಚಿಮಕ್ಕೆ ಹರ್ಟಸಗೋವಿನ ಮತ್ತು ಕ್ರೊಯೇಷಿಗಳಿವೆ.  ಪಶ್ಚಿಮಕ್ಕೆ ಏಡ್ರಿಯಾಟಿಕ್ ಸಮುದ್ರತೀರವಿದೆ.
ಯುಗೋಸ್ಲಾವಿಯ 12 ಗಣರಾಜ್ಯಗಳ ಒಕ್ಕೂಟ ರಾಷ್ಟ್ರ. ಇದರಲ್ಲಿ ಮಾಂಟನೀಗ್ರೊ ಮತ್ತು ಸರ್ಬಿಯಗಳಲ್ಲದೆ  ಹಿಂದಿನ ಸರ್ಬಿಯದ ವ್ಯಾಪ್ತಿಯಲ್ಲಿದ್ದ ಸ್ವಯಮಾಡಳಿತ ಪ್ರಾಂತಗಳು ಹಾಗೂ ಕಸವೋ, ಮಿಟೋಹಿಯ ಮತ್ತು ವಾಯ್ವವಡೀನಗಳು ಸೇರಿವೆ. ಒಟ್ಟು ವಿಸ್ತೀರ್ಣ 102173 ಚಕಿಮೀ. ಜನಸಂಖ್ಯೆ 106 ದಶಲಕ್ಷ (1998ರ ನಡುವೆ). ರಾಜಧಾನಿ ಬೆಲ್‍ಗ್ರೇಡ್.
ಭೌತಲಕ್ಷಣಗಳು: ಯುಗೋಸ್ಲಾವಿಯವನ್ನು ಮುಖ್ಯವಾಗಿ ಮೂರು ಭೌಗೋಳಿಕ ವಲಯಗಳಾಗಿ ಗುರುತಿಸಲಾಗಿದೆ. ಮಧ್ಯದ ಪ್ರಸ್ಥಭೂಮಿ. ಒಳನಾಡಿನ ಬಯಲುಗಳು ಮತ್ತು ತೀರಪ್ರದೇಶದ ದ್ವೀಪಸ್ತೋಮಗಳು.

ದೇಶದ ಸುಮಾರು ಮೂರನೆಯ ಒಂದು ಭಾಗದಷ್ಟು ವಿಸ್ತಾರವಾಗಿರುವ ಮಧ್ಯದ ಪ್ರಸ್ಥಭೂಮಿ ಬೆಟ್ಟಗುಡ್ಡ ಮತ್ತು ಕಣಿವೆಗಳಿಂದ ಕೂಡಿವೆ. ತೀರಪ್ರದೇಶವನ್ನು ದಾಟಿದಂತೆ ಪರ್ವತ ಶ್ರೇಣಿಗಳು ಸಮನಾಂತರವಾಗಿ ಒಳನಾಡಿನಲ್ಲಿ ಹಬ್ಬಿವೆ. ಈ ಪರ್ವತ ಶ್ರೇಣಿಗಳ ನಡುವೆ ನದೀ ಕಂದರಗಳು ಇವೆ. ಈ ಪ್ರದೇಶ ದುರ್ಗಮ ಲಕ್ಷಣದಿಂದಾಗಿ ಪ್ರತ್ಯೇಕತೆ ಹೊಂದಿದೆ. ವಾಯುವ್ಯ ಭಾಗದಲ್ಲಿರುವ ಸ್ಲೊವೇನಿಯದಲ್ಲಿ ಆಲ್ಪೈನ್ ಶ್ರೇಣಿಯ ಚಾಚುಗಳು ಹಬ್ಬಿವೆ. ಯುಗೊಸ್ಲಾವಿಯದ ಅತ್ಯಂತ ಎತ್ತರದ ಶಿಖರ ಟ್ರೀಗ್ಲಾವ್ (2.864 ಮೀ). ತೀರಪ್ರದೇಶಕ್ಕೆ ಸಮನಾಂತರವಾಗಿ 300-1500 ಮೀ ಎತ್ತರದವರೆಗೂ ಕಡಿದಾದ ಅನಿಯತ ಸುಣ್ಣದಕಲ್ಲಿನ ಬೆಟ್ಟ ಶ್ರೇಣಿಗಳು ಕಂಡುಬರುತ್ತವೆ. ಈ ಪ್ರಸ್ಥಭೂಮಿವಲಯಕ್ಕೆ ಕಾಸ್ರ್ಪ್ ಪ್ರದೇಶವೆಂಬ ಹೆಸರಿದೆ. ಕಾಸ್ರ್ಟ್ ವಲಯದ ದಕ್ಷಿಣಕ್ಕೆ ಬಿಡಿಬಿಡಿಯಾದ ಹಳ್ಳದಿಣ್ಣೆಗಳಿಂದ ಕೂಡಿದ ಪ್ರಸ್ಥಭೂಮಿಗಳಿವೆ. ಇದನ್ನು ನದಿಗಳು ಆಳವಾಗಿ ವಿಭಜಿಸಿವೆ. ಮುಂದೆ ಪೂರ್ವ ಸರ್ಬಿಯನ್ ಮಲೆನಾಡು ಪ್ರದೇಶವಿದ್ದು ಅದು ಸುಮಾರು 950ಮೀ ಎತ್ತರವಿರುವ ಉಪವಲಯವಾಗಿದೆ. ಏಡ್ರಿಯಾಟಿಕ್ ತೀರವಲಯ  ಅಸಂಖ್ಯ ಪರ್ಯಾಯದ್ವೀಪ ಮತ್ತು ದ್ವೀಪಗಳಿಂದ ಹಾಗೂ ಕಣಿವೆ ಮತ್ತು ಸಮುದ್ರ ಕಾಲುವೆಗಳಿಂದ ಕೂಡಿದ ಸಂಕೀರ್ಣ ಪ್ರದೇಶವಾಗಿದೆ.
ನದಿಗಳು: ಡ್ರಾವ, ಸೇವಸ್ ಮತ್ತು ಡಾನ್ಯೂಬ್ ನದಿಗಳ ಬಯಲುಗಳು ಮುಖ್ಯವಾದವು. ಈ ನದಿದಡಗಳಲ್ಲಿ ದೊಡ್ಡ ದೊಡ್ಡ ಜನವಸತಿ ಪ್ರದೇಶಗಳಿವೆ. ಇಲ್ಲಿನ ಶೇ. 70 ರಷ್ಟು ನದಿಗಳು ಕಪ್ಪು ಸಮುದ್ರವನ್ನೂ ಉಳಿದವು ಏಡ್ರಿಯಾಟಿಕ್ ಸಮುದ್ರವನ್ನೂ ಸೇರುತ್ತವೆ. ಡಾನ್ಯೂಬ್ ನದಿ ಯುಗೋಸ್ಲಾವಿಯದಲ್ಲಿ 588 ಕಿಮೀ ದೂರ ಹರಿಯುತ್ತವೆ. ಇದರ ಉಪನದಿಗಳಾದ ಸೇವಸ್, ಡ್ರಾವ, ಡ್ರೀನ, ವೆಲಿಕ, ಫೊರವ, ಮತ್ತು ಬಾಸ್ನಗಳು ದೇಶದ ಬಹು ಮುಖ್ಯ ನದಿಗಳಾಗಿವೆ. ವಾರ್ಡಾರ್ ಮತ್ತು ಅದರ ಉಪನದಿಗಳು ಏಜಿಯನ್ ಸಮುದ್ರ ಸೇರುತ್ತವೆ. ಈ ಎಲ್ಲ ನದಿಗಳ ಹರಿವಿನ ಮೊತ್ತ ಸು. 118371 ಕಿಮೀ.

ಇಲ್ಲಿನ ಅನೇಕ ಸರೋವರಗಳು ನೀರು ನೀಲಿ ಬಣ್ಣಕ್ಕಿದ್ದು ಈ ಸರೋವರಗಳನ್ನು ಪರ್ವತಗಳ ಕಣ್ಣುಗಳೆಂದೂ ಕರೆಯುತ್ತಾರೆ. ಸ್ಕೂಟ್‍ರೀ ದೇಶದ ಅತ್ಯಂತ ದೊಡ್ಡ ಸರೋವರವಾಗಿದ್ದು ಆಲ್ಬೇಯದೊಂದಿಗೆ ಸರಹದ್ದಾಗಿ ಪರಿಣಮಿಸಿದೆ.  ಒಬ್ರಿಡ್ ಮತ್ತು ಪ್ರೆಸ್ಟ್ ಸರೋವರಗಳು ದಕ್ಷಿಣ ಭಾಗದಲ್ಲಿವೆ.  

ವಾಯುಗುಣ:  ಇಲ್ಲಿ ಸಾಮಾನ್ಯ ಖಂಡಾಂತರ ವಾಯುಗುಣವಿದೆ.  ಚಳಿಗಾಲ ಶೀತದಿಂದಲೂ ಬೇಸಿಗೆ ಉಷ್ಣದಿಂದಲೂ ಕೂಡಿರುತ್ತದೆ.  ತೀರಪ್ರದೇಶದಲ್ಲಿ ವಾರ್ಷಿಕವಾಗಿ 650 ರಿಂದ 900 ಮಿಮೀ. ಮಳೆ ಬರುತ್ತದೆ.  ಒಳ ಪ್ರದೇಶದಲ್ಲಿ ಸರಾಸರಿ 254 ಸೆಂಮೀ. ಮಳೆಯಾಗುತ್ತದೆ.  ಪರ್ವತಗಳಲ್ಲಿ ಹಿಮಪಾತವಾಗುವುದುಂಟು.  

ಇಲ್ಲಿನ ಕಾಡುಗಳಲ್ಲಿ ಬೀಜ್, ಓಕ್ ಮತ್ತು ಗಟ್ಟಿದಾರು ಮರಗಳೂ ಎತ್ತರದ ಪರ್ವತಗಳಲ್ಲಿ ಪೈನ್ ಮರಗಳೂ ಇವೆ.  ಬಯಲುಗಳಲ್ಲಿ ಹುಲ್ಲು ಯಥೇಚ್ಛವಾಗಿ ಬೆಳೆಯುತ್ತದೆ.  ಜಿಂಕೆ, ಹಂದಿ, ತೋಳ, ನರಿ, ಕರಡಿ, ತುಪ್ಪಳದ ಬೆಕ್ಕು, ಕಾಡುಬೆಕ್ಕು, ಮೊಲ, ಹಾವು ಮೊದಲಾದ ಪ್ರಾಣಿಗಳಿವೆ.  ಇಲ್ಲಿನ ನದಿಗಳು ಮತ್ತು ಸರೋವರಗಳಲ್ಲಿ 350 ಬಗೆಯ ಮೀನುಗಳಿವೆ.
ವ್ಯವಸಾಯಕ್ಕೆ ಇಲ್ಲಿನ ಭೂಮಿ ಫಲವತ್ತಾಗಿದೆ.  ಎತ್ತರದ ತಗ್ಗುಪ್ರದೇಶಗಳಲ್ಲಿ ಸಹಕಾರಿ ಆಧಾರದ ಮೇಲೆ ದೊಡ್ಡ ತೋಟಗಳನ್ನು ಮಾಡಲಾಗಿದೆ.  ಇತರ ಭಾಗಗಳಲ್ಲಿ ಹೊಗೆಸೊಪ್ಪು, ಹತ್ತಿ, ಆಲೂಗೆಡ್ಡೆ, ಭತ್ತ, ಗೋಧಿ, ಪಪ್ಪಾಯಿ, ಗೆಣಸು, ಸೂರ್ಯಕಾಂತಿ, ದ್ರಾಕ್ಷಿ ಮೊದಲಾದವನ್ನು ಬೆಳೆಯುತ್ತಾರೆ.  ಕೈಗಾರಿಕೆಗಳ ಸ್ಥಾಪನೆಯಲ್ಲೂ ಯೂಗೋಸ್ಲಾವಿಯ ಹಿಂದೆ ಬಿದ್ದಿಲ್ಲ. ಕಬ್ಬಿಣೇತರ ಖನಿಜಗಳ ಕಾರ್ಖಾನೆಗಳು ಅಗಾಧ ಪ್ರಮಾಣದಲ್ಲಿ ಸ್ಥಾಪನೆಗೊಂಡಿವೆ.  ಇಲ್ಲಿ ಕಲ್ಲಿದ್ದಲು, ಸೀಸ, ಬಾಕ್ಸೈಟ್, ಮ್ಯಾಂಗನೀಸ್, ತಾಮ್ರ, ಸ್ವಾಭಾವಿಕ ಅನಿಲ, ಪೆಟ್ರೋಲ್ ಮೊದಲಾದ ಖನಿಜಗಳು ದೊರೆಯುತ್ತವೆ.  ಕೈಗಾರಿಕೆ ದೇಶದ ಮುಖ್ಯ ಆರ್ಥಿಕ ಮೂಲಗಳಲ್ಲಿ  ಒಂದಾಗಿದ್ದು ಲೋಹ ಕೆಲಸ, ಜವಳಿ ಮತ್ತು ಆಹಾರ ಸಂಸ್ಕರಣೆ ಇದರಲ್ಲಿ ಪ್ರಮುಖವಾಗಿವೆ.  ಏಡ್ರಿಯಾಟಿಕ್ ಸಮುದ್ರತೀರ ಪ್ರವಾಸೋದ್ಯಮಕ್ಕೆ ಹೆಸರಾಗಿದೆ.  ಪ್ರಕೃತಿ ಸೌಂದರ್ಯ ಮತ್ತು ಚಾರಿತ್ರಿಕ ಪರಂಪರೆ ಯೂಗೋಸ್ಲಾವಿಯಕ್ಕೆ ಪ್ರವಾಸಿಗಳನ್ನು ಸೆಳೆಯುತ್ತದೆ.  ಇದರಿಂದಾಗಿ ವಿದೇಶಿ ಹಣ ಅಪಾರವಾಗಿ ಹರಿದುಬರುತ್ತದೆ.  ಜಲವಿದ್ಯುತ್ ತಯಾರಿಕೆಗೆ ಅಪರಿಮಿತ ಅವಕಾಶವಿರುವುದು ವರದಾನವಾಗಿದೆ.  1993ರಲ್ಲಿ 34,156 ಮಿಲಿಯನ್ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದೆ.
ಕೈಗಾರಿಕೆ:  ವಾರ್ಷಿಕವಾಗಿ 11,48,000 ಕಚ್ಚಾ ತೈಲವನ್ನು 962 ಘನ ಮೀಟರುಗಳ ಸ್ವಾಭಾವಿಕ ಅನಿಲವನ್ನು ಹೊರತೆಗೆಯಲಾಯಿತು.  (1993) ಇದು ವಿವಿಧ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ.  1994ರಲ್ಲಿ 2,12,192 ಉದ್ಯಮಗಳಿದ್ದವು.  ವಾಹನಗಳ ತಯಾರಿಕೆಯಲ್ಲಿ ಯೂಗೋಸ್ಲಾವಿಯ ಮುಂದಿದೆ.  ಗೃಹೋಪಯೋಗಿ ಉಪಕರಣಗಳು ಮತ್ತು ಕಾಗದದ ಉತ್ಪನ್ನಗಳು ಅಗಾಧ ಪ್ರಮಾಣದಲ್ಲಿ ತಯಾರಾಗುತ್ತಿವೆ.  ಇಲ್ಲಿನ ಕೈಗಾರಿಕೆಗಳ ಬೆಳವಣಿಗೆಯಿಂದಾಗಿ ಜನಜೀವನ ಬಹುಭಾಗ ಕೈಗಾರಿಕೆಗಳನ್ನು ಅವಲಂಬಿಸಿದೆ.  ವ್ಯವಸಾಯವನ್ನು ಅವಲಂಬಿಸಿರುವವರ ಸಂಖ್ಯೆ ಕಡಿಮೆ.  ಸು. 1,073,126 (1991). ಇಲ್ಲಿನ ಅರಣ್ಯ ಸಂರಕ್ಷಣೆಗೂ ವಿಶೇಷ ಆಸಕ್ತಿ ವಹಿಸಲಾಗಿದೆ. ಅರಣ್ಯ ವಿಸ್ತರಣೆ 2,8,58,000 ಹೆಕ್ಟೇರುಗಳು.  
ಸಾರಿಗೆ ಸಂಪರ್ಕ:  ಬೆಟ್ಟಗುಡ್ಡ ಕಣಿವೆಗಳಿಂದಲೂ ನದಿಸರೋವರಗಳಿಂದಲೂ ಕೂಡಿರುವ ಈ ದೇಶದ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಸುಲಭದ ಕೆಲಸವಲ್ಲ.  ಆದರೆ ಇಲ್ಲಿನ ಆರ್ಥಿಕ ಚಟುವಟಿಕೆಗಳಿಂದಾಗಿ ರಸ್ತೆ, ರೈಲು ಮತ್ತು ವಿಮಾನ ಸಾರಿಗೆಗೆ ಹೆಚ್ಚಿನ ಗಮನ ಕೊಡಲಾಗಿದೆ.  ಹೆದ್ದಾರಿಗಳು, ಸೇತುವೆಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಹಡಗು ಕಟ್ಟೆಗಳನ್ನು ಆಧುನಿಕವಾಗಿ ನಿರ್ಮಿಸಲಾಗಿದೆ. ಇದರಲ್ಲಿ ಸರ್ಕಾರ ಹಾಗೂ ಖಾಸಗಿ ಉದ್ಯಮಿಗಳು ಬಂಡವಾಳ ಹೂಡಿದ್ದಾರೆ.  ವಿದೇಶಿ ಒಡೆತನದ 379 ಕಂಪನಿಗಳು 1992 ರಿಂದ ಸಾರಿಗೆಸಂಪರ್ಕ ಕ್ಷೇತ್ರದಲ್ಲಿ ಕಾರ್ಯನಿರತವಾಗಿವೆ.  

ರಸ್ತೆ ಮಾರ್ಗಗಳ ಒಟ್ಟು ಉದ್ದ 47,912 ಕಿಮೀ. ಇದರಲ್ಲಿ 6,477 ಕಿಮೀ ಉದ್ದದ ಹೆದ್ದಾರಿಗಳಿವೆ.  12,600ಕಿಮೀ ಉದ್ದದ ಪ್ರಾದೇಶಿಕ ರಸ್ತೆ ಮಾರ್ಗಗಳಿವೆ. ಉಳಿದ 28,835 ಕಿಮೀ ರಸ್ತೆಗಳು ಸ್ಥಳೀಯ ವ್ಯಾಪ್ತಿಯಲ್ಲಿವೆ. 1990ರಲ್ಲಿದ್ದ ನೋಂದಾಯಿತ ವಾಹನಗಳ ಸಂಖ್ಯೆ 2,056,452.

ಒಟ್ಟು 3,960 ಕಿಮೀ ಉದ್ದದ ರೈಲುಮಾರ್ಗವಿದ್ದು ಅದರಲ್ಲಿ 1,342 ಕಿಮೀ ಉದ್ದದ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗಿದೆ.  ರೈಲುಗಳು ವಾರ್ಷಿಕವಾಗಿ 3,17,35,000 ಪ್ರಯಾಣಿಕರನ್ನು ಮತ್ತು 57,42,000 ಟನ್‍ಗಳ ಸರಕನ್ನು ಸಾಗಿಸುತ್ತವೆ.  ಐದು ವಿಮಾನ ನಿಲ್ದಾಣಗಳಿವೆ.  ಪ್ರಯಾಣಿಕರ ಹಾಗೂ ಸರಕುಸಾಗಣೆಗೆ ಹಡಗುಗಳಿವೆ.
ದೇಶದಲ್ಲಿ 1,573 ಅಂಚೆ ಕಛೇರಿಗಳು, 22,74,000 ದೂರವಾಣಿಗಳು ಇವೆ (1993).  ಮೂರು ಸ್ವತಂತ್ರ ದೂರದರ್ಶನ ಪ್ರಸಾರ ಕೇಂದ್ರಗಳಿವೆ.  ದಿನಪತ್ರಿಕೆಗಳು, ನಿಯಕಾಲಿಕೆಗಳು ಇವೆ.  ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.  ಇಲ್ಲಿ 8ವರ್ಷಗಳ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. 4,435 ಪ್ರಾಥಮಿಕ ಶಾಲೆಗಳಿವೆ(92-93). ಉನ್ನತ ಶಿಕ್ಷಣಕ್ಕೆ ವಿಶ್ವವಿದ್ಯಾಲಯಗಳಿವೆ. 

(ಜೆ.ಎಸ್.ಎಸ್.; ಡಿ.ಎಸ್.ಜೆ.)

ಇತಿಹಾಸ:  ಯೂಗೋಸ್ಲಾವಿಯ ವಿವಿಧ ಭಾಷೆ, ಸಂಸ್ಕøತಿ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಒಂದು ಒಕ್ಕೂಟ.  ಯುರೋಪಿನ ಮುಖ್ಯ ಭಾಗಗಳಿಂದ ಕಾಲಕಾಲಕ್ಕೆ ಇಲ್ಲಿಗೆ ವಿವಿಧ ಸಾಂಸ್ಕøತಿಕ ಮೂಲಕ ಜನರು ಬಂದು ನೆಲೆಸಿದರು.  ಭೌಗೋಳಿಕವಾಗಿ ಇವರೆಲ್ಲ ಒಂದೇ ಪ್ರದೇಶಕ್ಕೆ ಸೇರಿದ್ದರೂ ಸಾಂಸ್ಕøತಿಕವಾಗಿ ಮತ್ತು ಮಾನಸಿಕವಾಗಿ ತಮ್ಮ ಕುಲಸಂಬಂಧಿ ಪ್ರಜ್ಞೆಯನ್ನು ಉಳಿಸಿಕೊಂಡರು.  ಜೊತೆಗೆ ಹದಿನಾಲ್ಕು ಹದಿನೈದನೆಯ ಶತಮಾನದಲ್ಲಿ ತುರ್ಕಿ ಸಾಮ್ರಾಜ್ಯ ಪೂರ್ವ ಯುರೋಪಿನವರೆಗೂ ವಿಸ್ತರಿಸಿದ್ದರಿಂದ ಮಹಮ್ಮದೀಯ ಅನುಯಾಯಿಗಳು ಇಲ್ಲಿ ಗಣನೀಯ ಸಂಖ್ಯೆಯಲ್ಲಿ ನೆಲೆಸಿದರು.  ಇಲ್ಲಿನ ಭೌಗೋಳಿಕ ಪ್ರತ್ಯೇಕತೆ ಸ್ವಾಭಾವಿಕವಾಗಿ ವಿವಿಧ ಜನಪದರ ಸಂಪರ್ಕ ದಟ್ಟಗೊಳ್ಳಲು ತಡೆಯಾಗಿದ್ದಿತು.  ಹತ್ತೊಂಭತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಪ್ರದೇಶದ ಬಹುಭಾಗ ಆಸ್ಟ್ರೊ-ಹಂಗರಿ ಸಾಮ್ರಾಜ್ಯದ ಅಧೀನದಲ್ಲಿತ್ತು.

ಹತ್ತೊಂಬತ್ತನೆಯ ಶತಮಾನದಲ್ಲಿ ದಕ್ಷಿಣ ಸ್ಲಾವ್‍ಭಾಷೆಯನ್ನಾಡುವವರು ಒಂದಾಗಬೇಕೆಂದು ಚಳವಳಿ ಪ್ರಾರಂಭವಾದರೂ ಅಷ್ಟು ಬಲಗೊಳ್ಳಲಿಲ್ಲ.  ಒಂದನೆಯ ಮಹಾಯುದ್ಧದ ಅನಂತರ ಆಸ್ಟ್ರೋ-ಹಂಗರಿ ಸಾಮ್ರಾಜ್ಯದ ಪತನದೊಂದಿಗೆ ಈ ಚಳುವಳಿಗೆ ಬಲಬಂದಿತು.  ಒಂದನೆಯ ಮಹಾಯುದ್ಧದಿಂದಾಗಿ ತುರ್ಕಿ ಸಾಮ್ರಾಜ್ಯ ಯುರೋಪಿನಲ್ಲಿ ದುರ್ಬಲವಾಯಿತು.  ತುರ್ಕಿಯ ಆಟ್ಟೋಮನ್ ಸಾಮ್ರಾಜ್ಯಕ್ಕೆ ಸೇರಿದ್ದ ಸರ್ಬಿಯದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿತು.  1917ರಲ್ಲಿ ಸರ್ಬಿಯ ಮತ್ತು ಇತರ ದಕ್ಷಿಣ ಸ್ಲಾವ್ ಪ್ರಾಂತ್ಯಗಳ ನಡುವೆ ಒಂದು ಒಡಂಬಡಿಕೆ ಏರ್ಪಟ್ಟಿತ್ತು.  ಇದರಂತೆ ಆಸ್ಟ್ರೋಹಂಗೇರಿ ಸಾಮ್ರಾಜ್ಯ ವಿಸರ್ಜನೆಯಾದಾಗ 1918 ಡಿಸೆಂಬರ್ 4ರಂದು ಸರ್ಬರ, ಕ್ರೊವೇಟರ್ ಮತ್ತು ಸ್ಲೊವೇನಿಯರ್ ಒಕ್ಕೂಟ ರಾಜ್ಯ ಅಸ್ತಿತ್ವಕ್ಕೆ ಬಂದಿತು.  
ಸರ್ಬಿಯದ ರಾಜ ಪ್ರತಿನಿಧಿಯಾಗಿದ್ದ ರಾಜಕುಮಾರ ಅಲೆಕ್ಸಾಂಡರ್ ಈ ಹೊಸ ರಾಜ್ಯದ ರಾಜಪ್ರಾತಿನಿಧಿತ್ವವನ್ನು (ರೀಜೆನ್ಸಿ) ಪಡೆದ.  ಆದರೆ ಮುಂದೆ ಸರ್ಬರು ಮತ್ತು ಕ್ರೊವೇಟರ ನಡುವಿನ ವಿವಾದದಿಂದಾಗಿ 1929 ಜನವರಿಯಲ್ಲಿ ರಾಜಪ್ರತಿನಿಧಿ ಅಲೆಕ್ಸಾಂಡರ್ ಸರ್ವಾಧಿಕಾರಿಯೆಂದು ಘೋಷಿಸಿಕೊಂಡು ಈ ಒಕ್ಕೂಟ ದೇಶಕ್ಕೆ ಯೂಗೋಸ್ಲಾವಿಯ ಎಂಬ ಹೆಸರಿಟ್ಟ (1929 ಅಕ್ಟೋಬರ್). ಆದರೆ 1934ರಲ್ಲಿ ಅವನು ಫ್ರಾನ್ಸ್‍ನಲ್ಲಿ ಒಬ್ಬ ಕ್ರೊವೇಟ ಉಗ್ರಗಾಮಿಯಿಂದ ಹತನಾದ. ಅವನ ಸಹೋದರ ಪಾಲ್ ಎರಡನೆಯ ಪೀಟರ್‍ನ ಪ್ರತಿನಿಧಿಯಾಗಿ ಇಲ್ಲಿ ಅಧಿಕಾರ ವಹಿಸಿಕೊಂಡ.

	ಕಮ್ಯೂನಿಸ್ಟ್‍ರು ಭೂಗತವಾಗಿ ರಾಜಾಳ್ವಿಕೆ ವಿರೋಧಿಸಿ ಚಳವಳಿಯನ್ನು ನಡೆಸುತ್ತಿದ್ದರು. ಅವರ ನಾಯಕ ಜೊಸೆಫ್ ಬ್ರಾಜ್ ಟಿಟೊ. ಎರಡನೆಯ ಮಹಾಯುದ್ಧದಲ್ಲಿ ಯೂಗೋಸ್ಲಾವಿಯ ಜರ್ಮನಿ ಮತ್ತು ಇಟಲಿ ಪಡೆಗಳ ವಶವಾಯಿತು. ಅಂತಿಮವಾಗಿ ಟಿಟೊನ ನೇತೃತ್ವದ ಕಮ್ಯುನಿಸ್ಟರು ಆಕ್ರಮಣಕಾರರ ವಿರುದ್ಧ ಹೋರಾಟ ನಡೆಸಿ ವಿಮೋಚಿತ ಪ್ರದೇಶದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡರು. 1944ರಲ್ಲಿ ರಾಜತ್ವವನ್ನು ತೊಡೆದು ಹಾಕಲಾಯಿತು. ಯುದ್ಧಾನಂತರ ಕಮ್ಯುನಿಸ್ಟರ ಮೇಲ್ವಿಚಾರಣೆಯಲ್ಲಿ ಪ್ರಾಂತೀಯ ಅಸೆಂಬ್ಲಿಗಳಿಗೆ ಚುನಾವಣೆಗಳು ನಡೆದವು. 1945 ನವೆಂಬರ್ 29ರಂದು ಯೂಗೋಸ್ಲಾವಿಯ ಸಂಯುಕ್ತ ಗಣರಾಜ್ಯವನ್ನು ರಚಿಸಲಾಯಿತು. ಟಿಟೊ ಪ್ರಧಾನಿಯಾದ. ಸೋವಿಯತ್ ಮಾದರಿ ಸಂವಿಧಾನ 1946 ಜನವರಿಯಲ್ಲಿ ಅಂಗೀಕೃತವಾಯಿತು. ಈ ಒಕ್ಕೂಟದಲ್ಲಿ ಒಟ್ಟು ಆರು ಗಣರಾಜ್ಯಗಳು ಸೇರಿದ್ದವು. ಅದೆಂದರೆ ಸರ್ಬಿಯ, ಮಾಂಟನೀಗ್ರೊ, ಕ್ರೊಯೇಷಿಯ, ಸ್ಲೊವೇನಿಯ, ಮ್ಯಾಸೆಡೋನಿಯ, ಬೋಸ್ನಿಯ ಹಾಗೂ ಹರ್ಟಸಗೊವೀನ.

	ಯೂಗೋಸ್ಲಾವಿಯ ಮಾರ್ಷಲ್ ಟಿಟೊನ ನೇತೃತ್ವದಲ್ಲಿ ಬಹಳಷ್ಟು ಮುನ್ನಡೆ ಸಾಧಿಸಿತು. ಇದು ಸೋವಿಯತ್ ರಷ್ಯದ ತತ್ತ್ವಗಳನ್ನು ಅನುಸರಿಸಿದರೂ ಸ್ವತಂತ್ರ ವಿದೇಶ ನೀತಿ ಹೊಂದಿತ್ತು. 1953ರಲ್ಲಿ ಹೊಸ ಸಂವಿಧಾನವನ್ನು ಅಂಗೀಕರಿಸಿ ಟಿಟೊ ಒಕ್ಕೂಟದ ಅಧ್ಯಕ್ಷನಾದ. 1963ರಲ್ಲಿ ದೇಶದ ಹೆಸರನ್ನು ಯೂಗೋಸ್ಲಾವಿಯ ಸಮಾಜವಾದಿ ಒಕ್ಕೂಟ ಗಣರಾಜ್ಯ ಎಂದು ಬದಲಾಯಿಸಲಾಯಿತು. ಅಂದು ಸೋವಿಯತ್ ರಷ್ಯ ಮತ್ತು ಅಮೆರಿಕಗಳ ಮೇಲಾಟದಲ್ಲಿ ಇಡೀ ವಿಶ್ವವೇ ಎರಡು ಬಣಗಳಾಗಿ ಒಡೆಯುವ ಸಂದರ್ಭ ಏರ್ಪಟ್ಟಿತ್ತು. ಆಗ ಟಿಟೊ 1961ರಲ್ಲಿ ಬೆಲ್‍ಗ್ರೇಡಿನಲ್ಲಿ ಅಲಿಪ್ತ ರಾಷ್ಟ್ರಗಳ ಸಮ್ಮೇಳನ ನಡೆಸಿ ಮೂರನೆಯ ಗುಂಪಿಗೆ ನಾಂದಿ ಹಾಡಿದ. ಇದರಲ್ಲಿ ಭಾರತದ ಪ್ರಧಾನಿಯಾಗಿದ್ದ ಜವಾಹರ್‍ಲಾಲ್ ನೆಹರೂ ಪ್ರಮುಖ ಪಾತ್ರವಹಿಸಿದ್ದರು.

	1974ರಲ್ಲಿ ಟಿಟೊ ಅನಿರ್ದಿಷ್ಟ ಅವಧಿಯವರೆಗೂ ರಾಷ್ಟ್ರದ ಅಧ್ಯಕ್ಷನಾಗಿರಲು ಅಧಿಕಾರ ಪಡೆದ.  ಪ್ರಾದೇಶಿಕ ಅಸಮಾನತೆ ನೀಗಲು ಪ್ರಯತ್ನಗಳು ನಡೆದವು.  ಆದರೆ ಯುಗೋಸ್ಲಾವಿಯ ಭಿನ್ನತೆಯ ಜ್ವಾಲಾಮುಖಿಯ ಮೇಲೆ ನಿಂತಿತ್ತು.  ಅಲ್ಲಿ ಸೆರ್ಬೊ-ಕ್ರೋಯೇಷಿಯ ಭಾಷೆ ಮಾತನಾಡುವ ಜನರು ಬಹುಸಂಖ್ಯೆಯಲ್ಲಿದ್ದರು.  ಜೊತೆಗೆ ಇತರ ಸ್ಲಾವಿಕ್ ಭಾಷೆಗಳನ್ನಾಡುವ ಜನರೂ ಸಾಕಷ್ಟಿದ್ದರು.  ಮೂರನೆಯ ಒಂದು ಭಾಗ ರೋಮನ್ ಕ್ಯಾಥೋಲಿಕರಿದ್ದರೆ ಹತ್ತನೆಯ ಒಂದು ಭಾಗ ಮುಸ್ಲಿಮರಿದ್ದರು.  ಉಳಿದವರು ಆರ್ಥೋಡಕ್ಸ್ ಚರ್ಚ್‍ಗೆ ಸೇರಿದವರು.  ಮ್ಯಾಸೆಡೋನಿಯನ್ನರು, ಮಾಂಟನೀಗ್ರೋಗಳು ಪ್ರತ್ಯೇಕತಾ ಭಾವನೆ ಹೊಂದಿದ್ದರು.  ಆಲ್ಬೇನಿಯನ್ನರು ಒಂದು ಪ್ರತ್ಯೇಕ ಸಮುದಾಯವಾಗಿದ್ದರು.  ಇವರೆಲ್ಲರ ನಡುವೆ ಒಂದು ಭಾವನಾತ್ಮಕ ಬೆಸುಗೆ ಹಾಕುವುದು ಟಿಟೊಗೆ ಸಾಧ್ಯವಾಗಲಿಲ್ಲ.  1980ರಲ್ಲಿ ಟಿಟೊ ನಿಧನನಾದ.

    	1984ರಲ್ಲಿ ಹೊಸ ಸರ್ಕಾರ ಐದು ವರ್ಷಗಳಿಗೆ ಚುನಾಯಿತವಾಯಿತು.  ಆಲ್ಬೇನಿಯನ್ನರು ಸ್ವಾಯುಕ್ತತೆಗಾಗಿ ಚಳುವಳಿ ಇಳಿದರು.  ಆಲ್ಬೇನಿಯನ್ನರ ದಬ್ಬಾಳಿಕೆಗೆ ವಿರೋಧವಾಗಿ ಸೆರ್ಬರು ಮತ್ತು ಮಾಂಟನೀಗ್ರೋಗಳು ಸಂಘಟಿತರಾದರು.  ಆರು ಗಣರಾಜ್ಯಗಳ ಸಂಯುಕ್ತ ಒಕ್ಕೂಟದಲ್ಲಿ ಬಿರುಕುಕಾಣಿಸಿತು.  1991ರಲ್ಲಿ ಸ್ಲೊವೀನಿಯ ಮತ್ತು ಕ್ರೊಯೇಷಿಯಗಳು ಪೂರ್ವ ಸ್ವಾತಂತ್ರ್ಯ ಘೋಷಿಸಿಕೊಂಡವು.  ಸರ್ಬರ ನಿಯಂತ್ರಣದಲ್ಲಿದ್ದ ಸರ್ಕಾರಿ ಸೈನ್ಯ ಪ್ರತೀಕಾರಕ್ಕೆ ಇಳಿಯಿತು.  ಸರ್ಬಿಯ ಮತ್ತು ಮಾಂಟನೀಗ್ರೊಗಳ ಸರಹದ್ದಿನಲ್ಲಿದ್ದ ಕ್ಯಾಂಡ್‍ಜೆಕ್ ಪ್ರದೇಶದಿಂದ ಎಪ್ಪತ್ತು ಸಾವಿರ ಜನ ಮುಸ್ಲಿಮರು ವಲಸೆ ಹೋದರು.  ವಿಶ್ವಸಂಸ್ಥೆ ಪಡೆಗಳ ಮಧ್ಯ ಪ್ರವೇಶವಾಯಿತು.  ಯುಗೋಸ್ಲಾವೀಯಾ ಕಿರಿದಾಗಿ ತನ್ನ ವೈಭವದ ದಿನಗಳನ್ನು ಕಳೆದುಕೊಂಡಿತು.  1992ರಿಂದ ಸರ್ಬಿಯ ಮತ್ತು ಮಾಂಟನೀಗ್ರೊ ಪ್ರಾಂತಗಳು ಸೇರಿ ಈ ಒಕ್ಕೂಟ ಗಣರಾಜ್ಯವನ್ನು ಸ್ಥಾಪಿಸಿಕೊಂಡವು.

     	ಸರ್ಕಾರದ ವ್ಯವಸ್ಥೆ:  ಅಖಂಡ ಯುಗೋಸ್ಲಾವಿಯ ಒಡೆದು ಸರ್ಬಿಯ ಮತ್ತು ಮಾಂಟನೀಗ್ರೊಗಳು ಯುಗೋಸ್ಲಾವಿಯ ಫೆಡರಲ್ ಗಣರಾಜ್ಯವನ್ನು ಸ್ಥಾಪಿಸಿಕೊಂಡಾಗ ಹೊಸ ಸರ್ಕಾರದ ವ್ಯವಸ್ಥೆ ಜಾರಿಗೆ ಬಂದಿತು.  ಇಲ್ಲಿನ ಸವೋಚ್ಚ ರಾಜಕೀಯ ಸಂಸ್ಥೆ ಫೆಡರಲ್ ಪಾರ್ಲಿಮೆಂಟ್.  ಈ ಸಂಸತ್ತಿನಲ್ಲಿ ಎರಡು ಸದನಗಳಿವೆ.  ಎರಡು ಸದನಗಳಿಗೂ ಸರ್ಬಿಯ ಮತ್ತು ಮಾಂಟನೀಗ್ರೊಗಳಿಂದ ಸಮಾನ ಸಂಖ್ಯೆಯ ಸದಸ್ಯರು ಚುನಾಯಿತರಾಗುತ್ತಾರೆ.  ಈ ಎರಡು ಸದನಗಳು ಸೇರಿ ಒಕ್ಕೂಟದ ಅಧ್ಯಕ್ಷರನ್ನು ಚುನಾಯಿಸುತ್ತವೆ.

    	ಹಿಂದಿನ ಯುಗೋಸ್ಲಾವಿಯ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದ್ದಿತು.  ಈಗ ವಿಭಜನೆಗೊಂಡು ಯುಗೋಸ್ಲಾವಿಯ ಒಕ್ಕೂಟಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯತ್ವ ದೊರೆತಿಲ್ಲವಾದರೂ ಇತರ ಅಂಗಸಂಸ್ಥೆಗಳಿಗೆ ಪ್ರವೇಶ ಕೊಡಲಾಗಿದೆ.
												(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ